ಪ್ರಮುಖಸೀಮಾಪ್ರಸ್ತರಭಂಗ 
	 ಪಂಜಾಬಿನಿಂದ ಆಸ್ಸಾಮ್‍ವರೆಗೆ ಹಿಮಾಲಯದ ಹೊರವಲಯದುದ್ದಕ್ಕೂ ಹಬ್ಬಿರುವ ಶಿವಾಲಿಕ್ ಶಿಲೆಗಳನ್ನು ಅವುಗಳಿಗಿಂತ ಪ್ರಾಚೀನವಾದ ಶಿಲಾ ಸಮುದಾಯಗಳಿಂದ ಪ್ರತ್ಯೇಕಿಸಿ ಎದ್ದು ಕಾಣಿಸುವ ಪ್ರಸ್ತರಭಂಗ (ಮೇನ್ ಬೌಂಡರಿ ಫಾಲ್ಟ್). ಇದು ಶಿಲೆಗಳಲ್ಲಾದ ಕೇವಲ ಸ್ಥಳಪಲ್ಲಟ ಮಾತ್ರವಲ್ಲದೆ ಮೊದಲಿನ ಟರ್ಷಿಯರಿ ಕಾಲದ ಶಿಲೆಗಳ ಮೂಲ ಸಂಗ್ರಹವೂ ಆಗಿ ಆಗಿನ ಪರ್ವತಗಳ ತಪ್ಪಲಲ್ಲಿ ಉತ್ಪನ್ನವಾದಾಗ ಇದ್ದ ಸರಹದ್ದನ್ನು ಸೂಚಿಸುತ್ತದೆಂದು ಮೊದಲು ಅಭಿಪ್ರಾಯವಿತ್ತು. ಟರ್ಷಿಯರಿ ಶಿಲೆಗಳು ಈ ಪ್ರಸ್ತರಭಂಗಕ್ಕೆ ಉತ್ತರದಲ್ಲಿ ಯಾವ ಪ್ರದೇಶದಲ್ಲಿಯೂ ಕಾಣಿಸಿಲ್ಲವೆನ್ನುವ ಆಧಾರ ಈ ಅಭಿಪ್ರಾಯಕ್ಕೆ ಕಾರಣವಾಗಿತ್ತು. ಆದರೆ ಹಿಮಾಲಯ ಶ್ರೇಣಿಗಳಲ್ಲಿ ಈಚೆಗೆ ತಪಶೀಲಾಗಿ ಭೂವಿಜ್ಞಾನರೀತ್ಯ ಪರೀಕ್ಷೆ ನಡೆಸಿದುದರ ಫಲವಾಗಿ ಪ್ರಮುಖ ಸೀಮಾಪ್ರಸ್ತರಭಂಗಕ್ಕೆ ಉತ್ತರದಲ್ಲಿ ಕೆಲವು ಸ್ಥಳಗಳಲ್ಲಿ ಟರ್ಷಿಯರಿ ಶಿಲೆಗಳು ಪ್ರಾಚೀನ ಶಿಲಾಸಮುದಾಯಗಳ ಕೆಳಗಡೆ ಇರುವುದು ಕಂಡುಬಂದಿದೆ. ಈ ಪ್ರಾಚೀನ ಶಿಲಾಸಮುದಾಯಗಳು ಟರ್ಷಿಯರಿ ಶಿಲೆಗಳ ಮೇಲೆ ನೂಕಲ್ಪಟ್ಟಿರುವುದರಿಂದ, ಅಂದರೆ ಶಿವಾಲಿಕ್ ಶಿಲೆಗಳು ಸಂಗ್ರಹವಾಗಿ ಅವುಗಳಲ್ಲಿ ಮಡಿಕೆಗಳೂ ಪ್ರಾಪ್ತವಾದ ಬಳಿಕ ಅವುಗಳ ಮೇಲೆ ಪ್ರಾಚೀನ ಶಿಲೆಗಳು ತಳ್ಳಲ್ಪಟ್ಟು ಆಗಿರುವುದರಿಂದ (ಓವರ್‍ಥ್ರಸ್ಟ್), ಟರ್ಷಿಯರಿ ಶಿಲೆಗಳು ಪ್ರಾಚೀನ ಶಿಲೆಗಳ ಕೆಳಗೆ ಹೂತುಹೋಗಿವೆ. ಒಂದೊಂದು ಸ್ಥಳದಲ್ಲಿ ನಗ್ನೀಕರಣವಾಗಿ (ಡಿನ್ಯೂಡೇಶನ್) ರಂಧ್ರಗಳ ಮೂಲಕ ಟರ್ಷಿಯರಿ ಶಿಲೆಗಳು ಕಾಣುತ್ತವೆ. ಆದ್ದರಿಂದ ಪ್ರಮುಖ ಸೀಮಾಪ್ರಸ್ತರಭಂಗ ಮೂಲಸಂಗ್ರಹದ ಸರಹದ್ದನ್ನು ಸೂಚಿಸುತ್ತದೆಂದು ಹೇಳುವುದಕ್ಕಿಂತ, ಪ್ರಾಚೀನಶಿಲೆಗಳು ನೂಕಲ್ಪಟ್ಟಿರುವ ದಕ್ಷಿಣದ ಅಂಚನ್ನು ಸೂಚಿಸುತ್ತದೆಂದು ಹೇಳುವುದು ಯುಕ್ತ.
(ಎಂ.ಬಿ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ